MSCHS Nirchal: MAHAJANA

MSCHS Nirchal: MAHAJANA


ರಸ್ತೆ ಸುರಕ್ಷೆಯನ್ನು ಹೆಚ್ಚಿಸಬೇಕು: ರಸ್ತೆ ಸುರಕ್ಷಾ ಸಮಿತಿ

Posted: 22 Jun 2015 04:28 AM PDT


"ಸಾವಿರಾರು ಮಂದಿ ವಿದ್ಯಾರ್ಥಿಗಳು ನಿತ್ಯ ಸಂಚಾರ ನಡೆಸುವ, ರಸ್ತೆಯನ್ನು ದಾಟಲು ಕಷ್ಟಪಡುವ ನೀರ್ಚಾಲು ಶಾಲಾ ವಠಾರದಲ್ಲಿ ರಸ್ತೆ ಸುರಕ್ಷೆಯು ಆತಂಕಕಾರಿಯಾಗಿದೆ. ಕುಂಬಳೆ-ಮುಳ್ಳೇರಿಯ ರಸ್ತೆಯು ಅಭಿವೃದ್ಧಿ ಹೊಂದಿರುವುದರಿಂದ ವಾಹನಗಳು ಅತ್ಯಂತ ವೇಗವಾಗಿ, ಭೀತಿ ಹುಟ್ಟಿಸುವಂತೆ ಚಲಿಸುತ್ತಿದ್ದು ಶಾಲಾ ವಿದ್ಯಾರ್ಥಿಗಳಿಗೆ ಮತ್ತು ನಾಗರಿಕರಿಗೆ ಗಂಭೀರ ಅಪಾಯವನ್ನೊಡ್ಡುತ್ತಿದೆ. ಈ ನಿಟ್ಟಿನಲ್ಲಿ ರಸ್ತೆ ಸುರಕ್ಷೆಯ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ಎಂದು ಬದಿಯಡ್ಕ ಗ್ರಾಮ ಪಂಚಾಯತು ಉಪಾಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಅಭಿಪ್ರಾಯಪಟ್ಟರು. ಅವರು ಇಂದು ಜರಗಿದ ರಸ್ತೆ ಸುರಕ್ಷಾ ಕ್ಲಬ್ ಮತ್ತು ಶಾಲಾ ಸಂರಕ್ಷಣಾ ಸಮಿತಿಗಳ ಜಂಟಿ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯೆ ಸೌಮ್ಯಾ ಮಹೇಶ್ ನಿಡುಗಳ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಗ್ರಾಮ ಪಂಚಾಯತು ಸದಸ್ಯ ಮಂಜುನಾಥ ಮಾನ್ಯ, ಪ್ರೌಢಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಅಪ್ಪಣ್ಣ ಸೀತಂಗೋಳಿ, ಕಿರಿಯ ಪ್ರಾಥಮಿಕ ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಹಾಸ, ಬದಿಯಡ್ಕ ಪೋಲೀಸು ಇಲಾಖೆಯ ರತ್ನಾಕರನ್, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಬಾಲಸುಬ್ರಹ್ಮಣ್ಯ ಭಟ್, ನೀರ್ಚಾಲು ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕೆಂಡರಿ ಶಾಲೆಯ ವ್ಯವಸ್ಥಾಪಕ ಜಯದೇವ ಖಂಡಿಗೆ ಉಪಸ್ಥಿತರಿದ್ದರು. ಶಾಲಾ ಮುಖ್ಯೋಪಾಧ್ಯಾಯ ಸಿ.ಎಚ್.ವೆಂಕಟರಾಜ ಸ್ವಾಗತಿಸಿ ಶಿಕ್ಷಕ ಶಿವಪ್ರಕಾಶ್ ಎಂ.ಕೆ ವಂದಿಸಿದರು.

ನೀರ್ಚಾಲು ಶಾಲೆಯ ಎದುರು ಭಾಗದ ರಸ್ತೆಯಲ್ಲಿ ಜೀಬ್ರಾ ಗುರುತು, ರಸ್ತೆ ಬಾರಿಕೇಡ್‌ಗಳನ್ನು ಅಳವಡಿಸುವುದು, ಶಾಲಾ ವಠಾರ ಎಂಬ ಸೂಚನಾ ಫಲಕದ ಸ್ಥಾಪನೆ ಮತ್ತು ಬಸ್ ಬೇ ನಿರ್ಮಾಣ ಮಾಡುವ ಕುರಿತು ಸಂಬಂಧಪಟ್ಟ ಅಧಿಕಾರಿಗಳನ್ನು ಸಂಪರ್ಕಿಸಿ ತಕ್ಷಣ ಕಾರ್ಯಗತಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

No comments:

Post a Comment

Previous Page Next Page Home